elephant image


ನಮ್ಮ ಬಗ್ಗೆ

ಪರಿಸರ ಮತ್ತು ವನ್ಯ ಜೀವಿಗಳ ಉಳಿವಿಗಾಗಿ ಸೇವೆ ಮಾಡ ಬೇಕೆಂದು ನಿರ್ಧರಿಸಿದ ಸಮಾನ ಮನಸ್ಕರ ತಂಡವೇ "ಪರಿಸರ ಮತ್ತು ವನ್ಯ ಜೀವಿಗಳ ಹಿತರಕ್ಷಣಾ ಸಮಿತಿ".

 

ಅವಶ್ಯಕತೆ ಮತ್ತು ಅವಕಾಶ ಇರುವೆಡೆ ಗಿಡಗಳನ್ನು ನೆಡುವುದು, ಅಳಿವಿನಂಚಿನಲ್ಲಿರುವ ವನ್ಯ ಜೀವಿ ರಕ್ಷಣೆ, ಕಾಡುಗಳ್ಳರ ವಿರುದ್ದ ಹೋರಾಟ, ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಪರಿಸರ ಮತ್ತು ವನ್ಯ ಜೀವಿಗಳ ಸಂರಕ್ಷಣೆ, ಬಹು ಮುಖ್ಯವಾಗಿ ಶಾಲಾ-ಕಾಲೇಜು ಆಸಕ್ತ ವಿದ್ಯಾರ್ಥಿಗಳಿಗೆ ವನ್ಯ ಜೀವಿಗಳ, ಪರಿಸರದ ಕುರಿತು ಜಾಗೃತಿ ಶಿಬಿರ ನಡೆಸುವ ಉದ್ದೇಶದಿಂದ ೨೦೦೪ ರಲ್ಲಿ ನಮ್ಮ ಸಮಿತಿ ಚಾಲನೆಗೆ ಬಂತು.

 

ಮೊದಲಿಗೆ ರಸ್ತೆ ಬದಿ, ಶಾಲಾ, ಕಾಲೇಜು, ಸರ್ಕಾರಿ ಕಛೇರಿಗಳ ಮುಂದೆ ಗಿಡ ನೆಡುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು, ಇಂದಿಗೂ ಅದೇ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.ಹೀಗೆ ಆರಂಭವಾದ ನಮ್ಮ ಚಟುವಟಿಕೆಗಳು ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಸದಿರುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು. ಹಾಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆವರಣದೊಳಗೆ ಪ್ಲಾಸ್ಟಿಕ್ ನಿಷೇಧಿಸಬೇಕೆಂದು ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ.

 

ಪ್ರತಿ ವರ್ಷ ಅಕ್ಟೋಬರ್ ೧ ರಿಂದ ೭ ರವರೆಗೆ ನಡೆಯುವ "ವನ್ಯ ಜೀವಿ ಸಪ್ತಾಹ" ಜುಲೈ ೧ ರಂದು ನಡೆಯುವ "ವಿಶ್ವ ಪರಿಸರ ದಿನಾಚರಣೆ" ಪ್ರಯುಕ್ತ ವನ್ಯ ಜೀವಿಗಳ ಕುರಿತಾದ ಕಾರ್ಯಕ್ರಮಗಳು ಪ್ರಮುಖ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ನಮ್ಮ ಸೇವೆಗೆ ಸಿಕ್ಕ ಸಹಕಾರವಾಗಿದೆ.

 

ಕೊಪ್ಪಳದಲ್ಲಿ ಜಿಂಕೆಗಳ ಸರಣಿ ಹತ್ಯೆಯಾದಾಗ, ಬೇಟೆಗಾರರ ವಿರುದ್ದ ಕ್ರಮಕ್ಕಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ, ವನ್ಯ ಜೀವಿಗಳ ಸಂರಕ್ಷಣೆಗಾಗಿ ಹತ್ತು ಯುವಕರ ತಂಡ ರಾಜ್ಯವ್ಯಾಪಿ ನಡೆಸಿದ ಸೈಕಲ್ ಪ್ರವಾಸಕ್ಕೆ ಅಂದಿನ ಪರಿಸರ ಮತ್ತು ಅರಣ್ಯ ಇಲಾಖೆಯ ಸಚಿವರಾಗಿದ್ದ ಗುರುಪಾದಪ್ಪನಾಗಮಾರಪಲ್ಲಿ, ಶಿಕ್ಷಣ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಶಾಸಕರು ಆಗಮಿಸಿದ್ದ ಕಾರ್ಯಕ್ರಮಕ್ಕೆ ಬಹಳಷ್ಟು ಪ್ರಚಾರ ಮತ್ತು ಸಹಕಾರ ವ್ಯಕ್ತವಾಗಿತ್ತು. ಇದರಿಂದ ನಮ್ಮ ಸಮಿತಿಯನ್ನು ವ್ಯವಸ್ಥಿತವಾಗಿ ನಿಯಮಾನುಸಾರ ಮುನ್ನಡಿಸಿಕೊಂಡು ಹೋಗುವ ಸಲುವಾಗಿ ಸಂಸ್ಥೆಗೆ ಹೊಸ ರೂಪ ನೀಡಿ "ಪರಿಸರ ಮತ್ತು ವನ್ಯಜೀವಿ ಹಿತ ರಕ್ಷಣಾ ಸಮಿತಿ" ಎಂದು ಸರ್ಕಾರದಲ್ಲಿ ನೊಂದಾಯಿಸಲಾಯಿತು.

 

ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸುವುದು, ವನ್ಯ ಜೀವಿಗಳ ಛಾಯಾ ಚಿತ್ರ ಪ್ರದರ್ಶನ, ವನ್ಯಜೀವಿಗಳಿಗೆ ಸಂಬಂದ ಪಟ್ಟ ಚಲನಚಿತ್ರ ಪ್ರದರ್ಶನ ಏರ್ಪಡಿಸುವುದು, ಅರಣ್ಯ ಚಾರಣ ನಡೆಸುವುದು, ತಜ್ನರಿಂದ ಉಪನ್ಯಾಸ ಹೀಗೆ ನಿರಂತರವಾಗಿ ಪರಿಸರ ಮತ್ತು ವನ್ಯಜೀವಿಗಳ ಉಳಿವಿಗಾಗಿ ಜಾಗೃತಿ ಮೂಡಿಸುತ ನಮ್ಮ ಸಂಸ್ಥೆ ಸಾಗಿ ಬಂದಿದೆ. 

 ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ಯು 1960 ರ ಕರ್ನಾಟಕ ಸೊಸೈಟಿ ನೊಂದಣಿ ಕಾಯದೆ ಪ್ರಕಾರ ಸ್ಥಾಪನೆಯಾಗಿರುವ ಸಂಸ್ಥೆಯಾಗಿದೆ. ಹಾಗೆಯೇ ಆದಾಯ ತೆರಿಗೆ ಕಾಯಿದೆ 1961 ರ ಪ್ರಕಾರ 12(A) ಮತ್ತು 80G ವಿಭಾಗದಲ್ಲಿಯೂ ನೊಂದಣಿ ಪತ್ರ ಪಡೆದಿದೆ.